ಕರ್ನಾಟಕದ ವಿಧಾನ ಪರಿಷತ್ತು - 1
ಆಳವಾದ ಅಧ್ಯಯನದ, ಚತುರ ಮಾತುಗಾರಿಕೆಯ ಮನೆ ಸಿ ಟಿ ಜೋಷಿ ಹಿರಿಯ ಪತ್ರಕರ್ತರು ಬೆಂಗಳೂರು ಒ ಬ್ಬ ಪ್ರತಿಪಕ್ಷದ ನಾಯಕರು ಸುಮಾರು ಒಂದೂವರೆ ದಿವಸ ವಿಷಯವೊಂದರ ಮೇಲೆ ಮಾತನಾಡಿದರು. ಒಂದೂವರೆ ಗಂಟೆಯಲ್ಲ, ಒಂದೂವರೆ ದಿವಸ! ನಿಲ್ಲಿಸುವಂತೆ ಸಭಾಪತಿ ಸೂಚಿಸಿದಾಗ "ನಾನು ಇನ್ನೂ ಅರ್ಧದಷ್ಟೂ ಭಾಷಣ ಮುಗಿಸಿಲ್ಲ" ಎಂದು ಅವರು ನುಡಿದರು. ಸರಿ. ಮತ್ತೆ ಅಂದಿನ ಇಡೀ ದಿನ ಅವರ ಮುಂದುವರಿದ ಭಾಷಣ. ಆದರೆ ಸಾಕಪ್ಪಾ ಸಾಕು ಇವರ ಭಾಷಣ ಎಂದು ಯಾರೂ ಅಂದುಕೊಳ್ಳಲಿಲ್ಲ. ಅಂಥ ಅಪ್ರತಿಮ ವಾಗ್ಮಿಗಳು ಅವರು. ×× ×× ತುಮಕೂರು ಜಿಲ್ಲೆಯ ಎಮ್ ವಿ ರಾಮರಾಯರು ಹಳೆಯ ಕಾಲದ, ಹಳೆಯ ಮೌಲ್ಯಗಳ ಧೀಮಂತ ನಾಯಕರು. ದೀರ್ಘ ಕಾಲ ನಮ್ಮ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಆಗ ಸಾಕಷ್ಟು ಸುದ್ದಿ-ಗದ್ದಲ ಮಾಡಿದ ಪ್ರಕರಣವೆಂದರೆ ಮಧುಗಿರಿಯಲ್ಲಿ ಮಹಿಳೆಯರ ಮೇಲೆ ಪೊಲೀಸರ ಆಪಾದಿತ ಅತ್ಯಾಚಾರ. ಸಹಜವಾಗಿಯೇ ವಿಧಾನ ಮಂಡಲದಲ್ಲಿ ವಾತಾವರಣ ಕಾವೇರುವುದಕ್ಕೆ ಇಂಧನವಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಆಗ ಗೃಹ ಮಂತ್ರಿಗಳಾಗಿದ್ದ ರಾಮರಾಯರು ಸಭೆಯಲ್ಲಿಯೇ, ಚರ್ಚೆಯ ನಡುವೆಯೇ, ರಾಜೀನಾಮೆ ಕೊಟ್ಟರು. ರೈಲ್ವೆ ದುರಂತವೊಂದರಿಂದ ನೊಂದು ರೈಲ್ವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಅನುಸರಿಸಿದರು. . ನೇರ ನುಡಿ-ನಡೆಯ ನಿಷ್ಠೂರವಾದಿ ಕೆ ಟಿ ಭಾಷ್ಯಂ ಸಭಾಪತಿಯಾಗಿದ್ದರು. ಒಂದು ಸಲ ಸ...