ಕರ್ನಾಟಕದ ವಿಧಾನ ಪರಿಷತ್ತು - 1

ಆಳವಾದ ಅಧ್ಯಯನದ,  ಚತುರ  ಮಾತುಗಾರಿಕೆಯ ಮನೆ




ಸಿ ಟಿ ಜೋಷಿ
ಹಿರಿಯ ಪತ್ರಕರ್ತರು
ಬೆಂಗಳೂರು  





ಬ್ಬ ಪ್ರತಿಪಕ್ಷದ ನಾಯಕರು ಸುಮಾರು ಒಂದೂವರೆ ದಿವಸ ವಿಷಯವೊಂದರ ಮೇಲೆ ಮಾತನಾಡಿದರು. ಒಂದೂವರೆ ಗಂಟೆಯಲ್ಲ, ಒಂದೂವರೆ ದಿವಸ! ನಿಲ್ಲಿಸುವಂತೆ ಸಭಾಪತಿ ಸೂಚಿಸಿದಾಗ "ನಾನು ಇನ್ನೂ ಅರ್ಧದಷ್ಟೂ ಭಾಷಣ ಮುಗಿಸಿಲ್ಲ" ಎಂದು ಅವರು ನುಡಿದರು. ಸರಿ. ಮತ್ತೆ ಅಂದಿನ ಇಡೀ ದಿನ ಅವರ ಮುಂದುವರಿದ ಭಾಷಣ. ಆದರೆ ಸಾಕಪ್ಪಾ ಸಾಕು ಇವರ ಭಾಷಣ ಎಂದು ಯಾರೂ ಅಂದುಕೊಳ್ಳಲಿಲ್ಲ. ಅಂಥ ಅಪ್ರತಿಮ ವಾಗ್ಮಿಗಳು ಅವರು.

×× ××

ತುಮಕೂರು ಜಿಲ್ಲೆಯ ಎಮ್ ವಿ ರಾಮರಾಯರು ಹಳೆಯ ಕಾಲದ, ಹಳೆಯ ಮೌಲ್ಯಗಳ ಧೀಮಂತ ನಾಯಕರು. ದೀರ್ಘ ಕಾಲ ನಮ್ಮ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು.

ಆಗ ಸಾಕಷ್ಟು ಸುದ್ದಿ-ಗದ್ದಲ ಮಾಡಿದ ಪ್ರಕರಣವೆಂದರೆ ಮಧುಗಿರಿಯಲ್ಲಿ ಮಹಿಳೆಯರ ಮೇಲೆ ಪೊಲೀಸರ ಆಪಾದಿತ ಅತ್ಯಾಚಾರ. ಸಹಜವಾಗಿಯೇ ವಿಧಾನ ಮಂಡಲದಲ್ಲಿ ವಾತಾವರಣ ಕಾವೇರುವುದಕ್ಕೆ ಇಂಧನವಾಯಿತು. ಪ್ರಕರಣದ ನೈತಿಕ ಹೊಣೆ ಹೊತ್ತು ಆಗ ಗೃಹ ಮಂತ್ರಿಗಳಾಗಿದ್ದ ರಾಮರಾಯರು ಸಭೆಯಲ್ಲಿಯೇ, ಚರ್ಚೆಯ ನಡುವೆಯೇ, ರಾಜೀನಾಮೆ ಕೊಟ್ಟರು. 

ರೈಲ್ವೆ ದುರಂತವೊಂದರಿಂದ ನೊಂದು ರೈಲ್ವೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮೇಲ್ಪಂಕ್ತಿ ಹಾಕಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಅನುಸರಿಸಿದರು.
.
ನೇರ ನುಡಿ-ನಡೆಯ ನಿಷ್ಠೂರವಾದಿ ಕೆ ಟಿ ಭಾಷ್ಯಂ ಸಭಾಪತಿಯಾಗಿದ್ದರು. ಒಂದು ಸಲ ಸದನದಲ್ಲಿ ಮುಖ್ಯಮಂತ್ರಿಯನ್ನೇ ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ ಜಿಲ್ಲೆಯ ಕೆ ವಿ ನರಸಪ್ಪನವರೂ ಇನ್ನೊಬ್ಬ ಧೀಮಂತ ರಾಜಕಾರಣಿ. ಅವರೂ ವಿಧಾನ ಪರಿಷತ್ತಿನ ಸಭಾಪತಿಯಾಗಿದ್ದರು. ಮಿತವಾದ, ಮೃದುವಾದ, ಅದರೆ ಮನಮುಟ್ಟುವಂತ ಮಾತು ಅವರದು.  
 
ಒಂದು ಸಲ ಇಬ್ಬರು ಹಿರಿಯ ಸದಸ್ಯರ ವಾಕ್ಸಮರ ಭರದಿಂದಲೇ ನಡೆದಿತ್ತು. ದಿನದ ಕಲಾಪವನ್ನು ಮುಗಿಸಿ ಸಭೆಯನ್ನು ಮರುದಿನಕ್ಕೆ ಮುಂದೂಡುವ ವೇಳೆ ಬಂದರೂ ಅವರ ದಾಳಿ-ಪ್ರತಿದಾಳಿ ನಿಲ್ಲುವ ಲಕ್ಷಣಗಳೇ ಇಲ್ಲ.

ಆಗ ನರಸಪ್ಪನವರು ಒಂದೇ ಒಂದು ಮಾತನ್ನು ತುಂಬ ಗಾಂಭೀರ್ಯದಿಂದ ಹೇಳಿದರು. "ಕೋರಂ-ಗಾಗಿ ಇನ್ನೂ ಸಭೆಯಲ್ಲಿ ಕುಳಿತಿರುವ ಸದಸ್ಯರ ಬಗೆಗೆ ನಿಮಗೆ ಕಾಳಜಿ ಇರಲಿ". ಒಮ್ಮೆಲೇ ಸಭೆ ತಣ್ಣ-ಗಾಯಿತು ಎಂದು ಬಿಡಿಸಿ  ಹೇಳಬೇಕಿಲ್ಲ.  

ಹೀಗೆ ಸಾಕಷ್ಟು ಬಿಸಿ ಏರಿದ ಸುದೀರ್ಘ ಚರ್ಚೆ ಆಗ ಸದನದಲ್ಲಿ ನಿತ್ಯವಿಧಿ. ಯಾವ ವಿಷಯವಾದರೂ  ದಿನಗಟ್ಟಲೆ ಸಮಾಲೋಚನೆ. ಆದರೆ ಎಂದೂ ಬೇಸರ ತರುವಂತಹದಲ್ಲ. ಸದಸ್ಯರ ಆಳವಾದ ಅಧ್ಯಯನ, ಸ್ಪಷ್ಟವಾದ  ಸ್ವಾರಸ್ಯಕರವಾದ ನಿರೂಪಣೆ, ಅವರ ಕೊಟ್ಟು ತಕ್ಕೊಳ್ಳುವ ಪ್ರವೃತ್ತಿ ಇವುಗಳಿಂದ ಚರ್ಚೆಗಳು ಕುತೂಹಲಕರವಾಗಿರುತ್ತಿದ್ದವು. ಎಷ್ಟೋ ಸಲ ವಿಧಾನ ಸಭೆಯ ಸದಸ್ಯರೂ ಈ ಮೇಲ್ಮನೆಗೆ ಬಂದು ಕುಳಿತುಕೊಳ್ಳತ್ತಿದ್ದರು. ಕಲಾಪಗಳ ಪತ್ರಿಕಾ ವರದಿಗಳಿಗಾಗಿ ರಾಜ್ಯದ ಜನರೂ ಕಾಯುತ್ತಿದ್ದರು. 

ಕೆಲವು ವರ್ಷಗಳ ಕಾಲ ಸದಸ್ಯರೊಬ್ಬರು ಖಾಸಗಿ ಶಿಕ್ಷಣ ಕ್ಷೇತ್ರದ ಅವ್ಯವಹಾರಿಗಳಿಗೆ ಸಿಂಹ ಸ್ವಪ್ನರಾಗಿದ್ದರು.

ಒಂದು ಸಲ ಸರಕಾರಿ ಸಾರಿಗೆ ಉದ್ಯೋಗಿಗಳ ಮುಷ್ಕರ. ಪರ್ಯಾಯ ವ್ಯವಸ್ಥೆ ಮಾಡದ್ದಕ್ಕೆ ಸಾರಿಗೆ ಮಂತ್ರಿಯನ್ನು ಸದಸ್ಯರು ಖಂಡಿಸಿದರು.

ಹಲವಾರು ಅನುಭವಿ ಕಾರ್ಮಿಕ ನಾಯಕರು ಆರಿಸಿ ಬಂದು ಕಾರ್ಮಿಕ ವರ್ಗದ  ಸಮಸ್ಯೆಗಳಿಗೆ ಸಾಕಷ್ಟು ಒತ್ತು ಸಿಕ್ಕಿದೆ.
ಕೆಲವು ಕನ್ನಡೇತರ ಭಾಷಿಕರ ಅಚ್ಚ ಅಸ್ಖಲಿತ ಕನ್ನಡ ಭಾಷಣಗಳು ಪರಿಷತ್ತಿನ ಒಂದು ವಿಶೇಷ ಆಕರ್ಷಣೆ.

ಬಜೆಟ್ ಅಂಗೀಕರಿಸುವುದು ಬಿಡುವುದು ಅಂತಿಮವಾಗಿ ಕೆಳಮನೆಯ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಪರಿಷತ್ತು ಅದನ್ನು ಪ್ರತಿ ವರ್ಷ  ಕೂಲಂಕಷವಾಗಿ ಪರಿಶೀಲಿಸಿದೆ.

ಸಭೆ ಸಾಕಷ್ಟು ಗಮನ ಹರಿಸಿರುವ ಇನ್ನೊಂದು  ಮಹತ್ವದ ವಿಷಯ ಭೂ ಸುಧಾರಣೆ.

ಇಂಥ ಸದಸ್ಯರ ಪಟ್ಟಿ ಮತದಾರರ ಪಟ್ಟಿಯಂತೆ ಉದ್ದವಾದುದು. ಎಮ್ ಪಿ ಎಲ್ ಶಾಸ್ತ್ರಿ, ಎ ಕೆ ಸುಬ್ಬಯ್ಯ,ಮಳ್ಳೂರ ಆನಂದರಾವ್, ಎಮ್ ಸತ್ಯನಾರಾಯಣರಾವ್, ಟಿ ಕೆ ಎಮ್ ಪೀರ್ ಸಾಬ್, ಜೆ ಬಿ ಮಲ್ಲಾರಾಧ್ಯ, ವೈ. ಎಸ್ 
ಪಾಟೀಲ, ಬಿ ಕೆ ಚಂದ್ರಶೇಖರ, ರಹಮಾನ ಖಾನ್, ರಾಮಕೃಷ್ಣ ಹೆಗಡೆ, ಟಿ ಆರ್ ಶಾಮಣ್ಣ, ಕೆ ಎಚ್
ಶ್ರೀನಿವಾಸ,  ಎಸ್ ಶಿವಪ್ಪ, ಕೆ ವಿ ಶಂಕರೆಗೌಡ, ಡಿ.ವಿ ಗುಂಡಪ್ಪ, ಎಲ್ ಜಿ ಹಾವನೂರ, ಕೆ ಕಣ್ಣನ್,  ಕೋಣಂದೂರು ಲಿಂಗಪ್ಪ, ಎಮ್ ಆರ್ ಲಕ್ಷ್ಮಮ್ಮ, ಡಾ. ಎಚ್. ನರಸಿಂಹಯ್ಯ ಇತ್ಯಾದಿ... ಇತ್ಯಾದಿ. 

ಸದಸ್ಯರು ಎಂದಿಗೂ ತಮ್ಮ ಸ್ವಂತಿಕೆಯನ್ನು ಬಿಟ್ಟು ಕೊಟ್ಟವರಲ್ಲ.  ಕೆಳಮನೆಯ ನಿರ್ಧಾರಗಗಳಿಗೆ ಯಾಂತ್ರಿಕವಾಗಿ ಅಸ್ತು ಅಂದವರಲ್ಲ. ದೇವರಾಜ ಅರಸು ಸರಕಾರ ವಿಧೇಯಕ ಒಂದನ್ನು ಮಂಡಿಸಿತು. ಚರ್ಚೆಯೂ ನಡೆಯಿತು. ಆದರೆ ಅದಕ್ಕೆ ಬಹುಮತವಿರದ ಕಾರಣ ಕೊನೆ ಗಳಿಗೆಯಲ್ಲಿ ಅದನ್ನು ಅಂಗೀಕರಿಸುವಂತೆ ವಿಧಿ ನಿಯಮಗಳಂತೆ ಅಗತ್ಯವಾದ ವಿದ್ಯುಕ್ತ ಪ್ರಸ್ತಾಪವನ್ನು ಸರಕಾರ ಮಂಡಿಸಲೇ ಇಲ್ಲ.

ಒಬ್ಬರು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಉಚ್ಚ ನಿವೃತ್ತ ಅಧಿಕಾರಿ. ಅಧ್ಯಯನಶೀಲರು. ಒಳ್ಳೆಯ ಮಾತುಗಾರರು. ಆದರೆ... ತಾವು ಹೇಳಿದ್ದೆಲ್ಲ ತಮಗೆ ಬೇಕಾದಂತೆಯೇ ಪತ್ರಿಕೆಗಳಲ್ಲಿ ಬರಬೇಕು. ಒಂದು ಸಲ ಅವರು ತಮ್ಮ ಭಾಷಣದ ನನ್ನ ವರದಿಯನ್ನು ಟೀಕಿಸಿ " ನಾನು ಹೇಳಿದ ಈ ಪಾಯಿಂಟ್ ನೀವು ಲೀಡ್ ಮಾಡಬೇಕಿತ್ತು" ಎಂದು ಪರಿಷತ್ತಿನ ಮೊಗಸಾಲೆಯಲ್ಲಿ ಆಕ್ಷೇಪಿಸಿದರು. ಕಿರುಚಿದರು. ನಾನು ಸಮಜಾಯಿಷಿ ಕೊಟ್ಟರೂ ಅವರ ಕಿರುಚಾಟ ನಿಲ್ಲಲಿಲ್ಲ. ಕೊನೆಗೆ ನಾನೂ ಜೋರು ಮಾಡಿದೆ: "ನೋಡಿ...ನಾನು ನಿಮಗೆ ಸ್ಪಷ್ಟೀಕರಣ ಕೊಡಬೇಕಿಲ್ಲ. ಬೇಕಿದ್ದರೆ ನಮ್ಮ ಸಂಪಾದಕರ ಜೊತೆಗೆ ಮಾತನಾಡಿ. ಅವರ ಫೋನ್ ನಂಬರ್ ಕೊಡಲಾ?". ಇದನ್ನು ಕೇಳಿ ಅಲ್ಲಿದ್ದ ನನ್ನ ಸಹೋದ್ಯೋಗಿಗಳು ಚೆನ್ನಾಗಿ ತಿರುಗೇಟು ಕೊಟ್ಟಿರಿ ಎಂದು ಮೆಚ್ಚುಗೆ ತೋರಿಸಿದರು.  
 
ಇನ್ನೊಬ್ಬರು ತಮ್ಮ ಹರಿತವಾದ, ವ್ಯಂಗ್ಯಭರಿತವಾದ ಭಾಷಣಗಳಿಂದ ರಾಜ್ಯಾದ್ಯಂತ ಜನಪ್ರಿಯರಾದರು. ಮುಂದೆ ತಮ್ಮದೇ ಪಕ್ಷವನ್ನು ರಚಿಸಿ ವಿಧಾನ ಸಭೆ ಚುನಾವಣೆಗೆ ನಿಂತರು. ಇತರ ಕೆಲವರನ್ನೂ ನಿಲ್ಲಿಸಿದರು. ಒಮ್ಮೆ ನಾನವರಿಗೆ ಹೇಳಿದೆ: "ಪಕ್ಷವನ್ನೇನೋ ಕಟ್ಟಿದಿರಿ. ಆದರೆ ಚುನಾವಣೆಯ ಪ್ರಚಾರಕ್ಕೆ ನಿಮ್ಮಲ್ಲಿ ಕಾರ್ಯಕರ್ತರು ಇಲ್ಲವಲ್ಲ". ಬೀಗುತ್ತ ಅವರು ಉತ್ತರಿಸಿದರು: "ನನ್ನ ಹೆಸರು ಕೇಳಿಯೇ ಜನರು ನನಗೆ ವೋಟ್ ಕೊಡುತ್ತಾರೆ". ಜನರು ಅವರ ಹೆಸರು ಕೇಳಿದ್ದರು. ವೋಟು ಕೊಡಲಿಲ್ಲ. ಚುನಾವಣೆಯಲ್ಲಿ ಅವರೇ ಸೋತರು. ಅವರ ಪಕ್ಷದ ಇನ್ನೊಬ್ಬ ಅಭ್ಯರ್ಥಿ ಮಾತ್ರ ಗೆದ್ದರು. 

1907 ರಲ್ಲಿ ರಚಿತವಾದ ಈ ಸದನದ ಸುದೀರ್ಘ ಇತಿಹಾಸದಲ್ಲಿ ನಡೆದು ಹೋದ ಸ್ವಾರಸ್ಯಕರ ಅವಿಸ್ಮರಣೀಯ ಪ್ರಸಂಗಗಳು ಲೆಕ್ಕವಿಲ್ಲದಷ್ಟು. 

×× ××  

ಬಿಸಿ ಬಿಸಿ ಚರ್ಚೆ ನಡೆದಿತ್ತು. ಬೆಂಗಳೂರಿನ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯ ಮೇಲಿದ್ದ ಆರೋಪಗಳ ಚರ್ಚೆ. ಒಬ್ಬ ಸದಸ್ಯರಿಂದ ಆ ಅಧಿಕಾರಿ ಮೇಲೆ ಸಕತ್ ವಾಕ್ಪ್ರಹಾರ. ಅಧಿಕಾರಿಯ ಇಡೀ ಚರಿತ್ರೆಯೆಲ್ಲ ಈ ಸದಸ್ಯರಿಗೆ ಗೊತ್ತು ಎಂದು ಎಲ್ಲರೂ ಅಂದುಕೊಂಡೆವು. ಸರಿ. ಸಭೆ ಮುಗಿದ ನಂತರ ಹೊರಗೆ ಮೊಗಸಾಲೆಯಲ್ಲಿ ಆ ಮಹನೀಯ ಸದಸ್ಯರು ವರದಿಗಾರರನ್ನು ಕೇಳಿದರು: ಯಾರು ಆ ಅಧಿಕಾರಿ? ಆತನ ಹೆಸರೇನು?!

ಪಾಪ. ಯಾವ ದೆವ್ವ ಆಗ ಅವರನ್ನು ಹಿಡಕೊಂಡಿತ್ತೋ. ಎಲ್ಲರೂ ಗೌರವಿಸುವ ವ್ಯಕ್ತಿ ಅವರು. ಉಡಾಫೆಯಾಗಿ ಎಂದೂ ಮಾತನಾಡುವವರಲ್ಲ.

×× ××                                                      

ಬಿ ಡಿ ಜತ್ತಿಯವರು ಆಹಾರ ಮಂತ್ರಿಯಿದ್ದಾಗ ಅವರ ಭಾಷಣವನ್ನು ಒಂದು ಪ್ರಮುಖ ದಿನಪತ್ರಿಕೆ ಆಕ್ಷೇಪಕರವಾಗಿ ವರದಿ ಮಾಡಿದೆ ಎಂಬ ಆಕ್ಷೇಪ ಸದನದಲ್ಲಿ ಮಿನಿ ಕೋಲಾಹಲಕ್ಕೆ ದಾರಿ ಮಾಡಿಕೊಟ್ಟಿತು.                                                   

×× ××

ಕೆಲ ದಶಕಗಳ ಹಿಂದೆ ಇಬ್ಬರು ಸಹೋದರರು ರಾಜ್ಯ ರಾಜಕೀಯದ ಮುಂಚೂಣಿಯಲ್ಲಿದ್ದರು. ಅಣ್ಣ ಮಂತ್ರಿ.  ತಮ್ಮ ಪರಿಷತ್ತಿನಲ್ಲಿ ಪ್ರತಿಪಕ್ಷದ ನಾಯಕ. ಒಂದು ಸಂದರ್ಭದಲ್ಲಿ ಸಭೆಯಲ್ಲಿ ಇಬ್ಬರ ಮಧ್ಯೆ ತೀವ್ರವಾದ ವಾದ-ವಿವಾದ ಎಲ್ಲ ಎಲ್ಲೆ ಮೀರಿತು. ಆವೇಶದ ಭರಭರಾಟೆಯಲ್ಲಿ ಇಬ್ಬರೂ  ಯಾವ ಸಂಕೋಚವೂ ಇಲ್ಲದೆ ಪರಸ್ಪರರ ಮೇಲೆ ಗಂಭೀರವಾದ ಅವ್ಯವಹಾರಗಳ ಆಪಾದನೆಗಳನ್ನು ಹೊರಸಿದರು. ಸಭೆ ದಂಗಾಗಿ ಹೋಯಿತು. 

×× ××
  
ಈ ತಮ್ಮನದೊಂದು ಖಯಾಲಿ. ತಮ್ಮ ಪ್ರತಿ ಭಾಷಣದ ನಂತರವೂ ಮೊಗಸಾಲೆಗೆ ಬಂದು ಅಲ್ಲಿದ್ದವರನ್ನು ಕೇಳುವರು: ಹೇಗಿತ್ತು ನನ್ನ ಭಾಷಣ? ಚೆನ್ನಾಗಿತ್ತು ಅಂದ ಕೂಡಲೇ  ಕಾಫಿ ತಿಂಡಿ ತರಿಸಿ ಕೊಡುವರು. ಕೆಲವರು ಚೆನ್ನಾಗಿತ್ತು ಎನ್ನುವುದನ್ನೇ ತಮ್ಮ ವ್ಯವಹಾರ ಮಾಡಿಕೊಂಡರು.                                          

×× ××

Comments

  1. Replies
    1. ಬರಹ ಆ ಮಟ್ಟದ ಪ್ರಶಂಸೆ ಗಳಿಸಿರುವುದು ಹೆಮ್ಮೆ.

      Delete

Post a Comment

Popular posts from this blog

Attention Friends, UPI is messed up!

An excellent choice for overall health & well-being

J K Nair: Indian version of Brian Tracy?