ಕರ್ನಾಟಕದ ವಿಧಾನ ಪರಿಷತ್ತು - 2

 ಪ್ರಜಾತಂತ್ರದಲ್ಲಿ ಬೇಕು: ರಾಜಿ-ಸಂಧಾನದಂತೆ ಧೃಢತೆ-ಸ್ಥಿರತೆ




ಸಿ ಟಿ ಜೋಷಿ
ಹಿರಿಯ ಪತ್ರಕರ್ತರು
ಬೆಂಗಳೂರು





ರ್ಚೆ, ಕೊಡಕೊಳುಗೆ ಇವು ಪ್ರಜಾಪ್ರಭುತ್ವದ ಜೀವಾಳ. ಆದರೆ ಕೆಲವೊಮ್ಮೆಯಾದರೂ ಯಾವುದೇ ಸರಕಾರ ವಿವಾದಗ್ರಸ್ತ ವಿಷಯಗಳಲ್ಲಿ  ಕಠಿಣವೆನಿಸಿದರೂ ಧೃಢವಾಗಿರಬೇಕಾಗುತ್ತದೆ. ಅದರಿಂದ ಏನೆಲ್ಲ ತೃಪ್ತಿಕರವಾಗಿ ಸಾಧಿಸಬಹುದು ಎಂಬುದನ್ನು ಒಮ್ಮೆ  ಕರ್ನಾಟಕ ತೋರಿಸಿಕೊಟ್ಟಿದೆ.

ಸಮಸ್ಯೆಗಳನ್ನು, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಅನೇಕ ಸಲ ರಾಜಿ- ಸಂಧಾನ ಇವು ಅಗತ್ಯವಾಗುತ್ತವೆ. ಅದಾಗ್ಯೂ ಶಿಸ್ತು-ಸ್ಥಿರತೆಗಳು ಕೂಡ ಅಗತ್ಯ ಎಂದೂ ತೋರಿಸಿತು.

1996-97 ರಲ್ಲಿ ಕರ್ನಾಟಕದ ಉನ್ನತ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಒಂದು ವರ್ಗದವರು ಪರೀಕ್ಷೆಗಳನ್ನು ಬಹಿಷ್ಕರಿಸಿದರು. ತಮ್ಮ ಸಂಭಾವನೆ ಹೆಚ್ಚಿಸಬೇಕೆಂಬುದು ಅವರ ಆಗ್ರಹವಾಗಿತ್ತು.

ಆಗ ರಾಜ್ಯದ ಉನ್ನತ ಶಿಕ್ಷಣ ಸಚಿವರು ಬಿ ಸೋಮಶೇಖರ. ಧೃಢತೆಗೆ, ಬಿಗಿತನಕ್ಕೆ ಹೆಸರಾದವರು. ನಿಯತ್ತಿಗೂ, ಮಾನವೀಯತೆಗೂ, ಪ್ರಾಮಾಣಿಕತೆಗೂ  ಅಷ್ಟೇ ಹೆಸರಾದವರು.

ರಾಜಕೀಯ ನಾಯಕರು ಸ್ವಲ್ಪ ಮಟ್ಟಿಗೆ ರಾಜಿ ಮಾಡಿಕೊಳ್ಳಬೇಕಾತ್ತದೆ ಎಂದು ನಾನೊಮ್ಮೆ ನುಡಿದಿದ್ದೆ. ಆಗ ಸೋಮಶೇಖರ ಹೇಳಿದ್ದು: ರಾಜಿ ಹಾಗೂ ಪ್ರಾಮಾಣಿಕತೆ ಒಟ್ಟಾಗಿ ಇರಲಾರವು.

ಸಾವಿರಾರು ಯುವಕ ಯುವತಿಯರ ಭವಿಷ್ಯದ ವಿಷಯವಿದು. ಅದಕ್ಕೆ ಬಾಧೆ ಬರುವ ಏನನ್ನೂ ಮಾಡಕೂಡದು  ಎಂಬುದು ಅವರ ಅಚಲ ಅಭಿ ಪ್ರಾಯ. 

ವಿದ್ಯಾರ್ಥಿಗಳೂ ಅವರ ಪಾಲಕರೂ  ಆತಂಕಕ್ಕೆ ಒಳಗಾಗಿದ್ದರು. ಪರೀಕ್ಷೆಗಳು ನಡೆಯುತ್ತಿವೆಯೋ ಇಲ್ಲವೋ ? ನಡೆಯದಿದ್ದರೆ ಮುಂದೇನು ? ಎಂಬ ಆತಂಕ. ಸಹಜವೇ.

ಪರೀಕ್ಷಾ ಬಹಿಷ್ಕಾರದ ಆ ಸೂಕ್ಷ್ಮ  ದಿನಗಳನ್ನು ಸೋಮಶೇಖರ ನೆನಪಿಸುತ್ತಾರೆ: ತಮ್ಮ ಬಿಗಿ ಪಟ್ಟು ಹುಸಿ ಹೋಗಲಿಲ್ಲ ಎಂಬುದು ಅವರ ಸಮಾಧಾನ. 

ಬಹಿಷ್ಕಾರದ ನಿರ್ಧಾರ ಹಠಾತ್ತಾಗಿತ್ತು. ಸಮಾಲೋಚನೆ ಇಲ್ಲ. ನೋಟಿಸ್ ಇಲ್ಲ. ಪರಿಹಾರಕ್ಕೆ ಪ್ರಯತ್ನ ಕೂಡ ಇಲ್ಲ  ಎಂದು ವರದಿಗಳಿದ್ದವು. 

ಸೋಮಶೇಖರ ತಮ್ಮ ಬಿಗಿ ನಿಲುವಿನಿಂದ ಹಿಂದೆ ಸರಿಯಲಿಲ್ಲ. ಮೊದಲು ಶಿಕ್ಷಕರು ತಮ್ಮ ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಲಿ. ತದನಂತರ ಮಾತುಕತೆ ಎಂಬುದು ಅವರ ನಿಲುವು. ಅಲ್ಲಿ ವರೆಗೆ ಅವರನ್ನು ಭೇಟಿಯಾಗಲೂ ಅವರು ನಿರಾಕರಿಸಿದರು.

ಮುಖ್ಯಮಂತ್ರಿ ಜೆ ಎಚ್ ಪಟೇಲರ ಬಗ್ಗೆ ಸೋಮಶೇಖರರಿಗೆ ಅಪಾರವಾದ ಗೌರವ, ವಿಶ್ವಾಸ. ಅವರು ತಮಗೆ ಪೂರ್ಣವಾಗಿ ಸಹಕಾರ ಕೊಟ್ಟು ಪರಿಸ್ಥಿತಿಯನ್ನು ನಿಭಾಯಿಸಲು ಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದರು ಎಂಬುದನ್ನು ಇನ್ನೂ ಜ್ಞಾಪಿಸಿಕೊಳ್ಳುತ್ತಾರೆ.

ಬಹಿಷ್ಕಾರದ ಅವಧಿಯಲ್ಲಿ ಕೆಲವು ಮುಷ್ಕರನಿರತರ ವಿರುದ್ಧ ತೆಗೆದುಕೊಂಡ ಶಿಸ್ತುಕ್ರಮವನ್ನು, ಅವರ ಬೇಡಿಕೆಗಳನ್ನು ಗಣನೆಗೆ ತಂದುಕೊಳ್ಳದೇನೇ, ಹಿಂಪಡೆದರು.

ಸರಕಾರಿ ಉದ್ಯೋಗಿಗಳ ಮೂಲಕ ಪರೀಕ್ಷೆಗಳನ್ನು ನಡೆಸಲು ಎಲ್ಲ ಏರ್ಪಾಡು ಮಾಡಿಕೊಂಡು ಅಗತ್ಯ ಬಿದ್ದರೆ ಅವರನ್ನು ಈ ಕೆಲಸಕ್ಕೆ ನಿಯೋಜಿಸಬೇಕು ಎಂದು ಸೋಮಶೇಖರ ಎಲ್ಲ ಜಿಲ್ಲೆಗಳ  ಡೆಪ್ಯೂಟಿ ಕಮೀಷನರವರಿಗೆ ಕಟ್ಟುನಿಟ್ಟಿನ ಆದೇಶ ಕೊಟ್ಟರು.

ಬೆಂಗಳೂರು ವಿಶ್ವವಿದ್ಯಾಲಯ ಹೊರತು ಪಡಿಸಿ ರಾಜ್ಯದ ಉಳಿದ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಸರಕಾರವೇ ಡೆಪ್ಯೂಟಿ ಕಮೀಷನರ್ ಆದಿಯಾಗಿ  ತನ್ನ ಸಿಬ್ಬಂದಿಯ ಸಹಕಾರದಿಂದ ಪರೀಕ್ಷೆಗಳನ್ನು ಯಶಸ್ವಿಯಾಗಿ ಕೈಗೊಂಡಿತು; ತದನಂತರ ಮುಷ್ಕರನಿರತರು ತಾವಾಗಿಯೇ ಹಿಂದೆ ಸರಿದು, ಮುಖ್ಯಮಂತ್ರಿಗಳನ್ನು ಕಂಡು,     ಬಹಿಷ್ಕಾರವನ್ನು ವಾಪಸು ಪಡೆದು  ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ನಡೆಸಿಕೊಟ್ಟರು; ತಮ್ಮ ಧೃಢವಾದ ನಿಲುವು ಫಲಪ್ರದವಾಯಿತು  ಎಂಬ ತಮ್ಮ ತೃಪ್ತಿಯನ್ನು ಸೋಮಶೇಖರ ನನ್ನೊಂದಿಗೆ  ಹಂಚಿಕೊಂಡರು.

Comments

Popular posts from this blog

Attention Friends, UPI is messed up!

An excellent choice for overall health & well-being

J K Nair: Indian version of Brian Tracy?